ಕ್ಲೆಬ್ಸ್, ಥಿಯೊಡೊರ್ ಆಲ್‍ಬ್ರೇಷ್ಟ್ ಎಡ್ವಿನ್

 1834-1913. ಜರ್ಮನಿಯ ಏಕಾಣುಜೀವಿ ಶಾಸ್ತ್ರಜ್ಞ. ಮೂತ್ರಕೋಶದ ರೋಗವಾದ ಗ್ಲಾಮೆರುಲೊ ನೆಫ್ರೈಟಿಸನ್ನು ಆವಿಷ್ಕರಿಸಿದವ (1870). ಆದ್ದರಿಂದ ಅದಕ್ಕೆ ಕ್ಲೆಬ್ಸ್ ಕಾಯಿಲೆ ಎಂದು ಹೆಸರಾಯಿತು. ಉಪದಂಶ (ಸಿಫಿಲಿಸ್) ರೋಗವನ್ನು ಕೋತಿಗಳಿಗೆ ವರ್ಗಾಯಿಸಿ ಪ್ರಯೋಗ ನಡೆಸಿದ. ಫ್ರೆಡರಿಕ್ ಲಾಫೆಲರ್‍ನೊಡನೆ ಸಹಕರಿಸಿ ಡಿಫ್ತೀರಿಯಾ ದಂಡಾಣು ಜೀವಿಗಳನ್ನು ಆವಿಷ್ಕರಿಸಿದ. ಆದ್ದರಿಂದ ಅವುಗಳಿಗೆ ಕ್ಲೆಬ್ಸ್-ಲಾಫೆಲರ್ ದಂಡಾಣು ಜೀವಿಗಳೆಂದು ಹೆಸರು ಬಂದಿದೆ.

	ಕ್ಲೆಬ್ಸ್ ಜನಿಸಿದ್ದು ಜರ್ಮನಿಯ ಕೊನಿಗ್ಸ್ ಬರ್ಗ್ ಎಂಬಲ್ಲಿ, 1834ರ ಫೆಬ್ರುವರಿ 6 ರಂದು. ಬರ್ಲಿನ್ನಿನ ರೋಗವಿಜ್ಞಾನ ಸಂಸ್ಥೆಯಲ್ಲಿ (ಪ್ಯಾಥಾಲಾಜಿಕಲ್ ಇನ್ಸ್‍ಟಿಟ್ಯೂಟ್) 1861-1866ರ ವರೆಗೆ ರುಡೋಲ್ಫ್ ವರ್‍ಷೊ ಎಂಬಾತನ ಸಹಾಯಕನಾಗಿ ಕೆಲಸ ಮಾಡಿದ. ಅನಂತರ ರೋಗವೈಜ್ಞಾನಿಕ ಅಂಗರಚನಾಶಾಸ್ತ್ರದ (ಪ್ಯಾಥಾಲಾಜಿಕಲ್ ಅನಾಟಮಿ) ಪ್ರಾಧ್ಯಾಪಕನಾಗಿ ಬರ್ನ್ (1866), ವಾಟ್ರ್ಸ್‍ವರ್ಗ್ (1871), ಪ್ರೇಗ್ (1873), ಜûುರಿಕ್ (1882) ಮತ್ತು ಚಿಕಾಗೊ (1896) ಪ್ರದೇಶಗಳಲ್ಲಿ ಕೆಲಸ ಮಾಡಿದ. ಫ್ರಾನ್ಸ್ ಮತ್ತು ಜರ್ಮನಿಗಳ ನಡುವೆ ನಡೆದ ಯುದ್ಧದಲ್ಲಿ, ಕೆಲವು ಗಾಯಗಳನ್ನು ಆಧರಿಸಿ ಗಾಯಗಳ ಸಾಂಕ್ರಾಮಿಕ ಏಕಾಣುಜೀವಿಗಳನ್ನು ಕುರಿತು ಸಂಶೋಧನೆ ನಡೆಸಿದ. ದೇಹದ ಯಾವುದೇ ಭಾಗದಲ್ಲಿರುವ ಸೋಂಕು ಹೃದಯದ ಒಳಪೊರೆಯ ಊತವನ್ನು (ಎಂಡೊಕಾರ್ಡೈಟಿಸ್) ಉಂಟುಮಾಡಬಹುದು ಎಂಬುದನ್ನು ಪ್ರಯೋಗದಿಂದ ತೋರಿಸುವುದರಲ್ಲಿ ಯಶಸ್ವಿಯಾದ (1876). ಕ್ಷಯರೋಗಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ನಡೆಸಿ ಹಾಲಿನ ಮೂಲಕ ಕ್ಷಯರೋಗದ ಸಾಂಕ್ರಾಮಿಕತೆ ಉಂಟಾಗುವುದನ್ನು ಕಂಡುಹಿಡಿದ. 1913ರ ಅಕ್ಟೋಬರ್ 23ರಂದು ಬರ್ನಿನಲ್ಲಿ ಕ್ಲೆಬ್ಸ್ ಗತಿಸಿದ. (ಎಸ್.ಎಚ್.ಪಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ